ಕೋಳಿಕ್ಕೋಡ್

ಕೇರಳ ರಾಜ್ಯದ ಒಂದು ಜಿಲ್ಲೆ. ಆ ಜಿಲ್ಲೆಯ ಮುಖ್ಯ ಪಟ್ಟಣ. ಕೋಳಿಕ್ಕೋಡ್ ನಗರ ಮಲಬಾರ್ ಕರಾವಳಿಯಲ್ಲಿದೆ. ಜನಸಂಖ್ಯೆ 3,33,980. ಇದೊಂದು ಸಣ್ಣ ಕೈಗಾರಿಕಾ ಕೇಂದ್ರ. ಮರ ಕೊಯ್ಯುವುದು, ಹೆಂಚು ತಯಾರಿಕೆ, ಕಾಫಿ ಪರಿಷ್ಕರಣೆ, ಹೆಣಿಕೆ ಉಡುಪು ತಯಾರಿಕೆ-ಇವು ಇಲ್ಲಿಯ ಮುಖ್ಯ ಕೈಗಾರಿಕೆಗಳು. ಹಿಂದೆ ಇದು ಹತ್ತಿ ಬಟ್ಟೆಗಳಿಗೆ ಬಹಳ ಪ್ರಸಿದ್ಧವಾಗಿತ್ತೆಂದು ವಿದೇಶಿಯರು ಈ ಸ್ಥಳವನ್ನು ಕ್ಯಾಲಿಕಟ್ ಎಂದು ಕರೆಯುತ್ತಿದ್ದುದರಿಂದ ಇಲ್ಲಿಯ ಬಟ್ಟೆ ಕ್ಯಾಲಿಕೋ ಎಂದು ಪ್ರಸಿದ್ಧವಾಯಿತೆಂದು ಹೇಳಲಾಗಿದೆ. ಕೋಳಿಕ್ಕೋಡ್ ವಿಶ್ವವಿದ್ಯಾಲಯ ಕೇಂದ್ರ. ಕಲೆ, ವಿಜ್ಞಾನ, ವೈದ್ಯಕ ಮತ್ತು ಶಿಕ್ಷಕರ ಕಾಲೇಜುಗಳು ಸಾಗರೀಕ ಜೀವಿಶಾಸ್ತ್ರ ಸಂಶೋಧನಾ ಸಂಸ್ಥೆಯೂ ಇವೆ. 

	ಕೋಳಿಕ್ಕೋಡ್ ಬಂದರು ಶ್ರೇಷ್ಠವಾದದ್ದೇನು ಅಲ್ಲ. ಮಳೆಗಾಲದಲ್ಲಿ ಇದು ಉಪಯೋಗಕ್ಕೆ ಬರುವುದಿಲ್ಲ. ಉಳಿದ ಕಾಲದಲ್ಲೂ ಹಡಗುಗಳು ತೀರದಿಂದ ಮೂರು ಮೈಲಿ ಆಚೆಗೆ ನಿಲ್ಲುತ್ತವೆ. ಕೋಳಿಕ್ಕೋಡ್ ನಗರದ ದಕ್ಷಿಣದಲ್ಲಿರುವ ಕಲ್ಲಾಯಿ ನದೀ ಮುಖದ ಬಳಿ ಇರುವ ಚೌಬೀನೆ ಕೋಠಿ ಇಡೀ ಭಾರತದಲ್ಲೇ ದೊಡ್ಡದು. ತೆಂಗಿನ ಉತ್ಪನ್ನಗಳು, ಮೆಣಸು, ಶುಂಠಿ, ಕಾಫಿ ಚಹಾ ಇವು ಕೋಳಿಕ್ಕೋಡ್ ಬಂದರಿನ ಮೂಲಕ ರಫ್ತಾಗುತ್ತವೆ. 

	ಕೋಳಿಕ್ಕೋಡ್ ಜಿಲ್ಲೆಯ ಜನಸಂಖ್ಯೆ 20,76,846 (1971). ವಿಸ್ತೀರ್ಣ 2,042 ಚ.ಮೈ. ಬಡಗರ, ಎರ್ನಾಡು, ಕೋಳಿಕ್ಕೋಡ್, ಕ್ವಿಲಾಂಡಿ, ದಕ್ಷಿಣ ವೈನಾಡು ಮತ್ತು ತಿರೂರು ಇಲ್ಲಿಯ ತಾಲ್ಲೂಕುಗಳು. ಭತ್ತ ಮುಖ್ಯ ಬೆಳೆ. ಬೇಸಾಯದ ಜೊತೆಗೆ ತೆಂಗಿನ ಉತ್ಪನ್ನಗಳು ಮತ್ತು ಅರಣ್ಯೋತ್ಪನ್ನಗಳನ್ನು ಸಿದ್ಧಪಡಿಸುವುದು ಒಂದು ಮುಖ್ಯ ಕಸುಬು.     (ಎಸ್.ಎನ್.ಎ.ಆರ್.)

ಇತಿಹಾಸ : ಕೋಳಿಕ್ಕೋಡ್ ಬಹಳ ಹಿಂದಿನಿಂದಲೂ ವಿದೇಶಿಯರ ಗಮನ ಸೆಳೆದಿದೆ. ಅರಬ್ಬೀ ವ್ಯಾಪಾರಿಗಳು 7ನೆಯ ಶತಮಾನದಲ್ಲಿ ಇಲ್ಲಿ ನೆಲೆಸಿದ್ದರು. ಅವರು ಸ್ಥಳೀಯರೊಂದಿಗೆ ವಿವಾಹ ಸಂಬಂಧ ಬೆಳೆಸಿದರು. ಇಲ್ಲಿಯ ಅನೇಕರು ಇಸ್ಲಾಂ ಮತಕ್ಕೆ ಪರಿವರ್ತನೆ ಹೊಂದಿದರು. ಇವರೇ ಮಾಪಿಳ್ಳೆಗಳು. ಪೆಡ್ರೋಕೋವಿಲ್‍ಹಾಂ ಎಂಬ ಪೋರ್ಚುಗೀಸ್ ಪ್ರವಾಸಿ 1487ರಲ್ಲಿ ಈ ಸ್ಥಳವನ್ನು ನೋಡಿ ಯೂರೋಪಿನ ಜನಾಂಗದವರ ವ್ಯಾಪಾರೋದ್ಯಮಗಳಿಗೆ ಇದರ ಪ್ರಾಶಸ್ತ್ಯವನ್ನು ಕುರಿತು ಬರೆದ. 1498ರಲ್ಲಿ ವಾಸ್ಕೋಡಗ್ಯಾಮ ಇಲ್ಲಿಗೆ ಭೇಟಿಯಿತ್ತಿದ್ದ. ಕವ್ರಾಲ್ ಇದನ್ನು ಕಂಡದ್ದು 1500ರಲ್ಲಿ. 1509ರಲ್ಲಿ ಫರ್ನಾಂಡೋ ಕೌಟಿನ್ ಹೋ ಇಲ್ಲಿ ಒಂದು ಕೋಟೆಯನ್ನು ಕಟ್ಟಲು ಉದ್ದೇಶಿಸಿ ಇದಕ್ಕೆ ಮುತ್ತಿಗೆ ಹಾಕಿ ಸೋತ. 1515ರಲ್ಲಿ ಪೋರ್ಚುಗೀಸರಿಗೂ ಜಾಮೋರಿನ್‍ಗೂ ಒಪ್ಪಂದವಾಯಿತು. ಇಲ್ಲಿ ಒಂದು ಕೋಠಿ ಕಟ್ಟಲು ಅವರಿಗೆ ಅವಕಾಶ ದೊರೆಯಿತು; ಆದರೆ ಈ ಕೋಠಿಯನ್ನು 1525ರಲ್ಲಿ ತ್ಯಜಿಸಲಾಯಿತು. 1615ರಲ್ಲಿ ಬ್ರಿಟೀಷ್ ಸೇನಾಧಿಕಾರಿ ಕ್ಯಾಪ್ಟನ್ ಕೀಲಿಂಗ್ ಇಲ್ಲಿ ಒಂದು ವ್ಯಾಪಾರ ಸಂಸ್ಥೆಯನ್ನು ಸ್ಥಾಪಿಸಿದ. ಕೋಳಿಕ್ಕೋಡ್ ಪಟ್ಟಣ 1765ರಲ್ಲಿ ಹೈದರನ ಆಕ್ರಮಣಕ್ಕೆ ಒಳಪಟ್ಟು ನಾಶವಾಯಿತು. ಆದರೆ 1782ರಲ್ಲಿ ಅವನ ಪಡೆಗಳು ಹಿನ್ನಡೆಯಬೇಕಾಯಿತು. ಆದರೆ 1788ರಲ್ಲಿ ಟಿಪ್ಪುಸುಲ್ತಾನ ಅದಕ್ಕೆ ಮತ್ತೆ ಮುತ್ತಿಗೆಹಾಕಿದ. ಅವನು ಅಲ್ಲಿಯ ನಿವಾಸಿಗಳನ್ನೆಲ್ಲ 10 ಕಿ.ಮೀ. ದಕ್ಷಿಣದಲ್ಲಿರುವ ಬೇಪೋರೆಗೆ ಕಳುಹಿಸಿಕೊಟ್ಟ. 1790ರಲ್ಲಿ ಕೋಳಿಕ್ಕೋಡನ್ನು ಬ್ರಿಟೀಷರು ಆಕ್ರಮಿಸಿಕೊಂಡರು. 1792ರ ಕೌಲಿನ ಪ್ರಕಾರ ಅದರ ಒಡೆತನ ಬ್ರಿಟಿಷರಿಗೆ ವರ್ಗವಾಯಿತು. ಹೊರಗೆ ಹೋಗಿದ್ದ ನಿವಾಸಿಗಳು ಅಲ್ಲಿಗೆ ಹಿಂದಿರುಗಿ, ನಾಶವಾಗಿದ್ದ ಪಟ್ಟಣವನ್ನು ಮತ್ತೆ ನಿರ್ಮಿಸಿದರು. 		 						(ಎಸ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ